ಮಲಿಕ್ ಅಂಬರ್
ಹದಿನಾರು-ಹದಿನೇಳನೆಯ ಶತಮಾನಗಳಲ್ಲಿ ಬಾಳಿದ ಸೇನಾನಿ, ಅಬಿಸೀನಿಯದ ಓರ್ವ ಗುಲಾಮ; ಅಹಮದ್‍ನಗರ ರಾಜ್ಯದಲ್ಲಿ ಮಹಾಮಾತ್ಮ ಪಟ್ಟಪಡೆಯುವತನಕ ಬೆಳೆದ ಸಮರ್ಥ ವ್ಯಕ್ತಿ. ಮಧ್ಯಯುಗದ ಉತ್ತಮ ರಾಜನೀಜ್ಞರಲೊಬ್ಬ. ಅಹಮದ್‍ನಗರ ಕೈಬಿಟ್ಟ ತರುವಾಯ ಆ ರಾಜ್ಯದ ರಾಜಧಾನಿಯಾಗಿದ್ದ ದೌಲತಾಬಾದನ್ನು ಜಯಿಸಲು ಬಂದ ಮೊಗಲ್ ಸೇನಾ ತಂಡವನ್ನು ಸೋಲಿಸಿದ ಬಳಿಕ (1601) ಪ್ರಸಿದ್ಧಿ ಹಾಗೂ ಪ್ರಾಮುಖ್ಯಕ್ಕೆ ಬಂದ ಈತ ಒಳ್ಳೆಯ ಸೇನಾನಿಯಾದುದರಿಂದ ರಾಜ್ಯ ಗೆಲ್ಲಲು ಮೊಗಲ್ ಅರಸು ಜಹಾಂಗೀರ್ ನಡೆಸಿದ ಎಲ್ಲ ಪ್ರಯತ್ನಗಳೂ ವಿಫಲವಾದುವು.

ದಕ್ಷ ಹಾಗೂ ಉತ್ತಮ ಆಡಳಿತ ಈತನ ಸಾಧನೆಗಳಲ್ಲೊಂದು. ಭೂಮಿಯ ಫಲವತ್ತತೆಯನ್ನು ಆಧರಿಸಿ ವರ್ಗೀಕರಿಸಿದ ಕಂದಾಯವನ್ನು ನೇರ ನೀಡುವ ವ್ಯವಸ್ಥೆಗಳನ್ನು ಜಾರಿಗೆ ತಂದ ಇದರ ಪರಿಣಾಮವಾಗಿ ರಾಜ್ಯದಲ್ಲಿ ಅರ್ಥಿಕ ಸ್ಥಿರತೆ ಉಂಟಾಯಿತು. ಸೈನಿಕರಿಗೆ ವಿಶೇಷವಾಗಿ ಮರಾಠರಿಗೆ, ಗೆರಿಲ್ಲಾ ರೀತಿಯ ಯುದ್ದ ತಂತ್ರಗಳನ್ನು ಕಲಿಸಿದುದು ಫಲಕಾರಿಯಾಯಿತು. 1626ರಲ್ಲಿ ಮಲ್ಲಿಕ್ ಅಂಬರ್‍ನ ಮರಣಾನಂತರವೇ ಅಹಮದ್‍ನಗರ ಮೊಗಲ್ ಸಾಮ್ರಾಜ್ಯದಲ್ಲಿ ಸೇರಿಹೋಯಿತು. ಅಬಿಸೀನಿಯದ ಒಬ್ಬ ಗುಲಾಮ ಇಷ್ಟರಮಟ್ಟಿಗಿನ ಔನತ್ಯಕ್ಕೇರಿದ ಘಟನೆ ಅಥವಾ ಉದಾಹರಣೆ ಇತಿಹಾಸದಲ್ಲಿ ಮತ್ತೆಲ್ಲಿಯೂ ದಾಖಲಾಗಿಲ್ಲವೆಂದು ಮೊಗಲ್ ಆಸ್ಥಾನದ ಇತಿಹಾಸಕಾರ ಮುತಾವಿಂದ್ ಖಾನ್ ಉಲ್ಲೇಖಿಸಿದ್ದಾನೆ. 
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ